ಗ್ರ್ಯಾಂಡ್ ರ್ಯಾಪಿಡ್ಸ್ -
	ಇದು ಅಮೆರಿಕದ ಸಂಯುಕ್ತಸಂಸ್ಥಾನಗಳ ಮಿಷಿಗನ್ ರಾಜ್ಯದ ಒಂದು ನಗರ. ಜನಸಂಖ್ಯೆಯ ದೃಷ್ಟಿಯಿಂದ ಈ ರಾಜ್ಯದ ಎರಡನೆಯ ನಗರ. ಗ್ರ್ಯಾಂಡ್ ನದಿಯ ದಡದಲ್ಲಿದೆ. ಜನಸಂಖ್ಯೆ 1,93,878 (1970). 1838ರಲ್ಲಿ ಇದು ಒಂದು ಹಳ್ಳಿಯಾಗಿತ್ತು. 1850ರ ವೇಳೆಗೆ ನಗರವಾಗಿ ಬೆಳೆದಿತ್ತು. 1824ಕ್ಕಿಂತಲೂ ಮೊದಲೇ ಇಲ್ಲಿ ಅನೇಕ ಇಂಡಿಯನ್ ವಸತಿಗಳೂ ವ್ಯಾಪಾರ ಕೇಂದ್ರಗಳೂ ಇದ್ದವು. ಪೀಠೋಪಕರಣ, ರೈಲ್ವೆ ಉಪಕರಣ ತಯಾರಿಸುವ ಬೃಹತ್ ಉದ್ಯಮಗಳಿವೆ. ಎರಕದ ಸರಕುಗಳು, ರೆಫ್ರಿಜಿರೇಟರ್ ಯಂತ್ರಗಳ ಬಿಡಿ ಭಾಗಗಳು, ರೇಡಿಯೊ ಫೋನೋಗ್ರಾಫ್, ಸೀಸದ ಸಾಮಾನು, ರಾಸಾಯನಿಕ ವಸ್ತು, ಗೊಬ್ಬರ, ಬಣ್ಣ, ಕಾಗದ ಮೊದಲಾದವನ್ನು ತಯಾರಿಸುವ ಕೈಗಾರಿಕೆಗಳು ಈ ನಗರದಲ್ಲಿವೆ. ಈ ಸುತ್ತಿನಲ್ಲಿ ಹಣ್ಣುಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಜಲ್ಲಿಕಲ್ಲು ಧಾರಾಳವಾಗಿ ದೊರಕುತ್ತದೆ. ಈ ನಗರದಲ್ಲಿ ಕಲಾವಸ್ತು ಸಂಗ್ರಹಾಲಯ ಮತ್ತು ಪೀಠೋಪಕರಣ ವಸ್ತು ಸಂಗ್ರಹಾಲಯಗಳೂ ರಂಗ ಮಂದಿರಗಳೂ ಇವೆ. ಕಾಲ್‍ವಿನ್ ಕಾಲೇಜೂ ಮಿಷಿಗನ್ ವಿಶ್ವವಿದ್ಯಾಲಯದ ಮತ್ತು ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದ ವಿಸ್ತರಣ ಕೇಂದ್ರಗಳೂ ತೋಟಗಾರಿಕೆ ಪ್ರಯೋಗಾಲಯ ಕೇಂದ್ರವೂ ಇಲ್ಲಿವೆ.

	ಅಮೆರಿಕದ ಮಿನ್ನೆಸೋಟದಲ್ಲಿ ಇದೇ ಹೆಸರಿನ ಒಂದು ಹಳ್ಳಿ ಇದೆ.
(ಎಸ್.ಎನ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ